ಜನ ಮರೆತ ಕಲ್ಯಾಣಪುರ-ಸಂತೆಕಟ್ಟೆಯ ಐತಿಹಾಸಿಕ ಕೋಟಿ ಚೆನ್ನಯ ಕಟ್ಟೆಗೆ ಬೇಕಿದೆ ಕಾಯಕಲ್

0


ಜನ ಮರೆತ ಕಲ್ಯಾಣಪುರ-ಸಂತೆಕಟ್ಟೆಯ ಐತಿಹಾಸಿಕ ಕೋಟಿ ಚೆನ್ನಯ ಕಟ್ಟೆಗೆ ಬೇಕಿದೆ ಕಾಯಕಲ್ಪ

ಕೋಟಿ ಚೆನ್ನಯರು ಪಡುಮಲೆಯಲ್ಲಿ ಬಾಲ್ಯ ಕಳೆದು ಅಂಗ ಸಾಧನೆಗಾಗಿ, ಗರಡಿ ವಿದ್ಯೆ ಕಲಿತು ಯುದ್ಧ ವಿದ್ಯೆಯಲ್ಲಿ ಪ್ರಾವಿಣ್ಯತೆಯನ್ನು ಪಡೆಯಬೇಕೆಂಬ ಇಚ್ಛೆಯನ್ನು, ಮಾವ ಸಾಯನ ಬೈದ್ಯರಲ್ಲಿ ವ್ಯಕ್ತ ಪಡಿಸುತ್ತಾರೆ. ನಮಗೆ ಸೂಕ್ತವಾದ ಯಾವ ಗರಡಿಯಲ್ಲಿ ಒಳ್ಳೆಯ ರೀತಿಯ ಗರಡಿಸಾಧನೆಯನ್ನು ಕಲಿಸುತ್ತಾರೆ ಎಂದು ಕೇಳಿದಾಗ, ಮಾವ ಹೇಳುತ್ತಾರೆ….AB2B0561 F469 4825 BB80 F102AD027411 1024x575

ಏರ್ದೆ ಬಾಲೆಲೆ ಕೋಟಿ ಚೆನ್ನಯೆರೆ ಮೂಡಾಯಿ ಪಕ್ಕೊಡ್ ಪೇರ್
ಪೆರ್ಮುಂಡೆ ಗರಡಿದ ಆದನೆಡ್ದ್ ….. ಯೇ…
ಪಡ್ಡಾಯಿ ಪಕ್ಕೊಡ್ ಉಂಡು ಕಟ್ಟಪಾಡಿ ನಾನಾಯರೆ ಗರಡಿದ ಆದಾನೆ
ಎಡ್ಡೆ ಎಡ್ಡೆನ್ನಗಾ….. ಯೇ…

ಅಂದರೆ…. ಕೋಟಿ ಚೆನ್ನಯ ಮಕ್ಕಳೇ, ಮೂಡುದಿಕ್ಕಿನ ಪೇರ್ ಪೆರ್ಮುಂಡೆ ಗರಡಿಯ ಅಂಗ ಸಾಧನೆಗಿಂತಲೂ ಪಡುದಿಕ್ಕಿನ ಕಟಪಾಡಿ ನಾನಯರ ಗರಡಿಯ ಅಂಗಸಾಧನೆ ಕಲಿಸುವಿಕೆಯು ಉತ್ತಮವಾದುದು ಎಂದು ಸಾಯನ ಬೈದ್ಯರು ಹೇಳುವರು.
ಮಾವನ ಸಲಹೆಯಂತೆ ಕಟಪಾಡಿ ನಾನಯರ ಗರಡಿಯನ್ನು ಆಯ್ಕೆ ಮಾಡಿ, ಇಲ್ಲಿ ಹನ್ನೆರಡು ವರ್ಷ ಗರಡಿ ಅಂಗಸಾಧನೆ ಮಾಡಿ ಸಮರಕಲೆಯ ಪಟ್ಟುಗಳಲ್ಲಿ ಪರಿಣತಿಯನ್ನು ಹೊಂದುತ್ತಾರೆ. ಕೋಟಿ ಚೆನ್ನಯ ಆ ಮೂಲಕ ದೇಹ ಬಲ, ಮನೋಬಲ ವೃದ್ಧಿಸಿಕೊಂಡು ತುಳುನಾಡಿನಲ್ಲಿ ಅನ್ಯಾಯ ಅಧರ್ಮದ ವಿರುದ್ಧ ಸೆಟೆದು ನಿಂತು ಹೋರಾಡುವ ವೀರರಾಗಿ ಇಲ್ಲಿ ರೂಪುಗೊಳ್ಳುತ್ತಾರೆ.D82EC55C 84F4 4713 AC1A 4E5C1A408D2C 1024x659

ಈ ಹೊತ್ತಲ್ಲಿ ಸುತ್ತಮುತ್ತಲಿನ ಊರುಗಳಲ್ಲಿ ತಿರುಗಾಡಿದ ಕೋಟಿ ಚೆನ್ನಯರು, ಸಮಾಜದಲ್ಲಿ ಇದ್ದಂತಹ ಅಸಮಾನತೆ, ಶೋಷಣೆ, ದೌರ್ಜನ್ಯ, ಬಡಜನರು ಅನುಭವಿಸುತ್ತಿದ್ದ ಯಾತನೆ, ಬವಣೆಗಳನ್ನು ಕಣ್ಣಾರೆ ಕಂಡುಕೊಳ್ಳುತ್ತಾರೆ. ನಮ್ಮಂತೆಯೇ ಕೆಳವರ್ಗದ ಜನ ಸಾಮಾನ್ಯರು ಗರಡಿ ವಿದ್ಯೆಯನ್ನು ಕಲಿಯುವ ಅವಶ್ಯಕತೆ ಇರುವುದನ್ನು ಮನಗಾಣುತ್ತಾರೆ. ತುಳುನಾಡಿನಾದ್ಯಂತ ತಿರುಗಿ ಒಂದು ಸದೃಡ ಪಡೆಯನ್ನು ಕಟ್ಟುವಲ್ಲಿ ಚಿಂತನೆಯನ್ನು ಮಾಡುತ್ತಾರೆ. ಯುವಕರನ್ನು ಸಂಘಟಿಸುತ್ತಾ ಗೋದೆ ಗರಡಿ ಅಂಗಸಾಧನೆಯ ಮಹತ್ವ, ಅವಶ್ಯಕತೆಯನ್ನು ತಿಳಿಯಪಡಿಸುತ್ತಾರೆ. ಅದರಂತೆ ಸ್ಥಳೀಯ ಆಳು ಅರಸರ, ಬಳ್ಳಾಲರುಗಳ, ಪಾಳೆಗಾರರುಗಳ ಅನುಮತಿ ಪಡೆದು ಗರಡಿ, ತಾವುಗಳ ನಿರ್ಮಾಣ ಮಾಡಿ ಜನರನ್ನು ಗರಡಿವಿದ್ಯಾಪ್ರವೀಣರನ್ನಾಗಿಸಲು ಪಣತೊಡುತ್ತಾರೆ.BEA2ED3D 4850 49D6 B59D F87975C4A575 779x1024

ನಾನಯರ ಗರಡಿಯಿಂದ ಹೊರಟ ವೀರ ಬಾಲಕರಾದ ಕೋಟಿ ಚೆನ್ನಯರು ತಮ್ಮ ಉದ್ದೇಶ ಇರೆಡಿಸಲು ಕಾಪು ಮಾಗಣೆಯ ಅರಸರನ್ನು, ಕಟಪಾಡಿಯ ರಾಜರನ್ನು ಅಲ್ಲದೆ ಎರ್ಮಾಳು ಮಾರಂಬಾಡಿ ಅರಸರನ್ನು ಭೇಟಿ ಮಾಡಿ ಅಲ್ಲಿಂದ ಮುಂದಕ್ಕೆ ಸೂಡ ಕಂಬುಲದ ಕರ್ತುಲನ್ನು ಭೇಟಿ ಆಗುತ್ತಾರೆ. ಮುಂದೆ ಅಲ್ಲಿಂದ ಹೊರಟು ಒಂದು ಆಷಾಡದ ಸಂಕ್ರಮಣದ ದಿನ ಮರ್ಣೆ ಬೋಳೂರಿಗೆ ಭೇಟಿ ಕೊಟ್ಟು ಅಲ್ಲಿಂದ ಪಡ್ಡಮದ ಅರಸರನ್ನು ಕಂಡು, ಬೊಮ್ಮರೊಟ್ಟಿನ ಸೆಟ್ಟಿಬಾಲೆಯನ್ನು ಹೋಗಿ ಕಾಣುತ್ತಾರೆ. ಅಂಜಾರು ಬೀಡಿನ ಅರಸರನ್ನು ನೋಡುವರು. ಮೂಡನಿಡಂಬೂರಿನ ಬಳ್ಳಾಲರಲ್ಲಿ ಅನುಮತಿ ಪಡೆದು ಮೂಡನಿಡಂಬೂರಿನಲ್ಲಿ ಗರಡಿ ನಿರ್ಮಿಸಿದರೆ ಮುಂದೆ ಬಡನಿಡಿಯೂರಿನ ಈಗಿನ ಕಲ್ಯಾಣಪುರದಲ್ಲಿ ಗರಡಿ ನಿರ್ಮಾಣಕ್ಕೆ ಸಂಕಲ್ಪ ಮಾಡುತ್ತಾರೆ. ಅದರಂತೆ ಇಲ್ಲಿಯ ಊರವರನ್ನು ಸಂಘಟಿಸಿ, ಸಮೀಪದ ವೀರಬದ್ರ ದೇವಸ್ಥಾನದ ಎಡ ಪಕ್ಕದ, ಪ್ರಸ್ತುತ ಸಂತೆಕಟ್ಟೆಯ ಟೂರಿಸ್ಟ್ ಕಾರ್ ಸ್ಟಾಂಡಿನ ಎದುರಿಗಿನ ರಸ್ತೆ ಪಕ್ಕದಲ್ಲಿರುವ ಕಟ್ಟೆಯಲ್ಲಿ ಕೋಟಿ ಚೆನ್ನಯರು ಕುಳಿತು ಊರವರೊಂದಿಗೆ ಸಮಾಲೋಚಿಸುತ್ತಾರೆ. ಆ ಸಮಯದಲ್ಲಿ, ಬಾಯಾರಿಕೆಗೆ ಕೊಟ್ಟ ಗೆಂದಾಳಿ ಬೊಂಡ (ಸೀಯಾಳ) ಕತ್ತಿಯಿಂದ ಕೆತ್ತುತಿದ್ದಂತೆಯೇ, ಆ ಸೀಯಾಳದ ಒಂದು ಕೆತ್ತೆ ಹಕ್ಕಿಯಂತೆ ಮೇಲೆ ಹಾರಿ ಸ್ವರ್ಣ ನದಿಯ ಪಕ್ಕದಲ್ಲಿನ ಸೀಗೆಯ ಬಲ್ಲೆಗೆ ಬೀಳುತ್ತದೆ. ಈವೊಂದು ಅನೀರಿಕ್ಷಿತ ಘಟನೆಯಿಂದಾಗಿ ಸೋಜಿಗಗೊಂಡ ಕೋಟಿ ಚೆನ್ನಯರು ಸೀಯಾಳದ ಕೆತ್ತೆ ಹಾರಿ ಬಿದ್ದ ಅದೇ ಸ್ಥಳವು ಗರಡಿಕಟ್ಟಲು ಪ್ರಶಸ್ತವಾದ ಜಾಗ ಎಂದು ತಿಳಿಸಿದರು. ಈ ಸ್ಥಳವು ಇನ್ನು ಮುಂದಿನ ದಿನಗಳಲ್ಲಿ “ಪಕ್ಕಿಬೊಟ್ಟು” ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಲಿ ಎಂದು ಅನುಗ್ರಹಿಸಿದರು. ಈಗ ಈ ಸ್ಥಳ “ಪಕ್ಕಿಬೆಟ್ಟು”, ಎಂದು ಕರೆಯಲ್ಪಡುತ್ತದೆ.

ಇಂದು ಕಲ್ಯಾಣಪುರ-ನೈಯಂಪಳ್ಳಿಯ ರಾ.ಹೆ. 66ರ ಸೇತುವೆಯ ಕೂಗಳತೆಯ ದೂರದಲ್ಲಿ, ಸ್ವರ್ಣ ನದಿಯ ತಟದಲ್ಲಿ, ಸುಂದರ ಪ್ರಕೃತಿಯ ಐಸಿರಿಯ ನಡುವೆ ಪಕ್ಕಿಬೆಟ್ಟು ಶ್ರೀ ಬ್ರಹ್ಮ ಬೈದೇರುಗಳ ಗರಡಿ ಕಂಗೊಳಿಸುತ್ತಿದೆ. ಇಲ್ಲಿ ಬೆರ್ಮೆರ್, ಬೈದ್ಯೇರುಗಳು, ದೈವ ಪಂಜುರ್ಲಿ ಆದಿಯಾಗಿ ನಂಬಿ ಬರುವ ಭಕ್ತರ ಅಭಿಷ್ಠೆಗಳನ್ನು ನೆರೆವೇರಿಸುತ್ತಿವೆ.

ಆಗಿನ ಕಾಲಕ್ಕೆ ಕಲ್ಯಾಣಪುರದ ಕಲ್ಯಬಾಗಿಲಿನ ಮೂಲಕ ಬಡಗುನಾಡನ್ನು ಸಂಪರ್ಕಿಸುವ ಬಹುಮುಖ್ಯ ರಸ್ತೆ ಮಾರ್ಗ ಇದಾಗಿತ್ತು. ಕೋಟಿ ಚೆನ್ನಯರು ಕೃಷಿ ಚಟುವಟಿಕೆಗಳಿಗೆ ಮಹತ್ವ ಕೊಡುತ್ತಿದ್ದುದರಿಂದ ಬೈದ್ಯೇರುಗಳು ವಿರಾಜಮಾನರಾದ ಈ ಪವಿತ್ರ ಕಟ್ಟೆಯನ್ನೇ ಮೂಲವಾಗಿರಿಸಿ ಸಂತೆ ಮಾರುಕಟ್ಟೆ ಪ್ರಾರಂಬಿಸಲು ಜನರಿಗೆ ಪ್ರೇರಣೆ ಆಗುತ್ತಾರೆ. ರಾಷ್ಟೀಯ ಹೆದ್ದಾರಿ ನಿರ್ಮಾಣ ಆಗುವವರೆಗೆ ಇದೇ ಕಟ್ಟೆಯ ಆಸು ಪಾಸು ಸಂತೆ ನಡೆಯುತ್ತಿತ್ತು. ಸೆಗಣಿ ಸಾರಿಸಿದ ಕಟ್ಟೆಯಲ್ಲಿ ಭಕ್ತಿಯಿಂದ ದೀಪ ಉರಿಸಿ, ಸಂತೆಯ ಸಮಯ ಕಟ್ಟೆ ತುಳಿಯದೆ ಶ್ರೇಷ್ಠ ಎನಿಸುವ ಪಿಂಗಾರ, ಎಲೆಅಡಿಕೆ, ಹೂವುಗಳನ್ನು ಇದರ ಮೇಲೆ ಇಟ್ಟು ಮಾರಾಟ ಮಾಡುತ್ತಿದ್ದರಂತೆ. ಈ ಕಟ್ಟೆಯನ್ನು ಆದರಿಸಿ ಸಂತೆ ನಡೆಯುತ್ತಿದ್ದುದರಿಂದ ಈ ಪ್ರದೇಶಕ್ಕೆ “ಸಂತೆಕಟ್ಟೆ” ಎಂದು ಹೆಸರು ಬರುವಂತಾಯಿತು. ತದನಂತರ ರಾಷ್ಟೀಯ ಹೆದ್ದಾರಿ ನಿರ್ಮಾಣ ಆಗಿ ಊರು ಬೆಳೆದಂತೆ ರಾಷ್ಟೀಯ ಹೆದ್ದಾರಿಯ ಪಕ್ಕ ಸಂತೆ ಮಾರುಕಟ್ಟೆ ವರ್ಗಾಯಿಸಲ್ಪಡುತ್ತದೆ. ಕಾಲದ ಮಹಿಮೆಯಿಂದಲೊ ಎನೊ ಪುನರಪಿ ಸಂತೆ ಮಾರುಕಟ್ಟೆ ಇದೇ ಬೈದ್ಯೆರ್ಲೆನ ಕಟ್ಟೆಯ ಎದುರಿಗಿನ, ಉಡುಪಿ ಮುನಿಸಿಪಾಲಿಟಿಯವರು ಕಟ್ಟಿಸಿದ ಬೃಹತ್ತ್ ಕಟ್ಟಡಕ್ಕೆ ವರ್ಗಾವಣೆ ಆಗಿ ಹಿಂದಿನ ಜಾಗದಲ್ಲೆ ಸಂತೆ ನಡೆಯಲಿದೆ.

ತಿಳಿದ ಹಿರಿಯರು ಈಗಲೂ ಈ ರಸ್ತೆ ಪಕ್ಕ ಹಾದು ಹೋಗುವಾಗ ಕಾಲಿನ ಚಪ್ಪಲಿ ತೆಗೆದಿಟ್ಟು ಈ ಕಟ್ಟೆಗೆ ನಮಸ್ಕರಿಸಿ ಮುಂದೆ ಹೋಗುತ್ತಾರೆ. ಸುಮಾರು 50 ವರ್ಷದ ಹಿಂದೆ ತನಕ, ಕದಿರು ಕಟ್ಟುವ ಹಬ್ಬಕ್ಕೆ ಕದಿರನ್ನು ಹಿಂದಿನ ರಾತ್ರಿ ಭತ್ತದ ಗದ್ದೆಯಿಂದ ಕೊಯಿದು ಈ ಬೈದೇರುಗಳ ಕಟ್ಟೆಯಲ್ಲಿ ಇಡುತ್ತಿದರು. ಮುಂಜಾವ ಬೇಗ ಈ ಕಟ್ಟೆಯಲ್ಲಿ ಇರಿಸಿದ ಕದಿರಿಗೆ ಪೂಜೆ ಸಲ್ಲಿಸಿ ವಾದ್ಯದೊಂದಿಗೆ ಕದಿರನ್ನು ಪಕ್ಕಿಬೆಟ್ಟು ಗರಡಿಗೆ ತರುತ್ತಿದ್ದರಂತೆ. ಹಿಂದೊಮ್ಮೆ ಪಕ್ಕಿಬೆಟ್ಟು ಗರೋಡಿಗೆ ಉತ್ಸವ ಸಂದರ್ಭದಲ್ಲಿ, ಸಂತೆಕಟ್ಟೆಯಿಂದ ಮೆರವಣಿಗೆ ಸಾಗುತ್ತಿದ್ದಂತೆ , ಮೆರವಣಿಗೆಯ ಮುಂಚೂಣಿಯಲ್ಲಿ ಇದ್ದ ಆನೆಯು ಇನ್ನೇನು ಈ ಕಟ್ಟೆಯನ್ನು ಹಾದುಹೋಗಬೇಕು ಎನ್ನುವಷ್ಟರಲ್ಲಿ ಏಕಾಏಕಿಯಾಗಿ ಯಾರ ಸೂಚನೆಯೂ ಇಲ್ಲದೆ ತಿರುಗಿ ಮಂಡಿ ಊರಿ ಸೊಡಿಲನ್ನು ಎತ್ತಿ ಕಟ್ಟೆಗೆ ನಮಸ್ಕರಿಸಿ ಮುಂದೆ ಸಾಗಿದನ್ನು ಹಿರಿಯರು ನೆನಪಿಸುತ್ತಿದ್ದರು.

ಆದರೆ, ಐತಿಹಾಸಿಕ ಎನ್ನಬಹುದಾದ ಕಲ್ಯಾಣಪುರ ಪಕ್ಕಿಬೆಟ್ಟು ಗರೋಡಿ ನಿರ್ಮಾಣಕ್ಕೆ ಮತ್ತು ಊರಿನ ಹೆಸರಿಗೆ ಕಾರಣವಾದ ಮತ್ತು ಸಂತೆ ಮಾರುಕಟ್ಟೆಗೆ, ಆಮೂಲಕ ಸಂತೆಕಟ್ಟೆ ಹೆಸರಿಗೆ ಪ್ರೇರಣೆಯಾದ ಕೋಟಿ ಚೆನ್ನಯರ ಈ “ಬೈದ್ಯೆರ್ಲೆನ ಕಟ್ಟೆ” ಇಂದು ತೀವ್ರ ನಿರ್ಲಕ್ಷಕ್ಕೆ ಒಳಗಾಗಿದೆ. ಇದು ಇಂದೊ ನಾಳೆಯೋ ರಸ್ತೆ ಅಗಲಿಕರಣದಂತಹ ಕಾಮಗಾರಿಗಳಿಗೆ ಸಿಲುಕಿ ನಾಮಾವಷೇಶ ಆಗುವುದರಲ್ಲಿದೆ. ಅನಾಗರಿಕ ಜನರು ಬಿಸಾಡಿದ ಮದ್ಯದ ಖಾಲಿ ಬಾಟಲಿಗಳಗೂಡಾಗಿದ್ದ ಈ ಕಟ್ಟೆಯನ್ನು ಇತ್ತೀಚೆಗೆ ಸ್ವಲ್ಪ ಮಟ್ಟಿಗೆ ಶುಚಿಯಾಗಿಸಿದ್ದಾರೆ. ಸಾಮಾಜಿಕ, ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿದ ಈ ಸ್ಥಳವನ್ನು ಗ್ರಾಮಸ್ಥರು ಕಾಪಿಡುವಲ್ಲಿ ಮುತುವರ್ಜಿವಹಿಸಿಕೊಳ್ಳಬೇಕು. ಪಕ್ಕಿಬೆಟ್ಟು ಗರೋಡಿ ಜೀರ್ಣೋದ್ಧಾರಗೊಳ್ಳುವ ಈ ಸುಸಂದರ್ಭದಲ್ಲಿ ಈ ಐತಿಹಾಸಿಕ ಕೋಟಿ ಚೆನ್ನಯ ಕಟ್ಟೆಯನ್ನೂ ಮೂಲ ರೂಪದಲ್ಲಿ ಉಳಿಸುವಲ್ಲಿ ಗರಡಿಯ ಆಡಳಿತ ಮಂಡಳಿ ಕಾಳಜಿ ತೊರಿಸಬೇಕು. ಹಿಂದಿನ ಕದಿರ ಹಬ್ಬದಂತಹ ಆ ನಡಾವಳಿಗಳು ಪುನಃ ಪ್ರಾರಂಭಿಸಿ ಆಚರಣೆಗಳನ್ನು ಸಮಾಜದ ನಡುವೆ ಜೀವಂತ ಇರಿಸಬೇಕು. ಕಟ್ಟೆಯಲ್ಲಿ ಶಾಶ್ವತ ಪಲಕ ಆಳವಡಿಸಬೇಕು. ಸಾಮಾಜಿಕ ಸಹಬಾಳ್ವೆಯ ಅನುಸಾರ ಸಂತೆಕಟ್ಟೆ-ಕಲ್ಯಾಣಪುರ – ಕೆಮ್ಮಣ್ಣು ಕೂಡು ರಸ್ತೆಯ ಸರ್ಕಲಿಗೆ “ಕೋಟಿ ಚೆನ್ನಯ ಸರ್ಕಲ್” ಎಂಬ ಹೆಸರನ್ನು ಇಡುವ ಮೂಲಕ ಇತಿಹಾಸವನ್ನು ರಕ್ಷಿಸುವುದರ ಜೊತೆಗೆ ಆ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ. *ಚಿತ್ರ ಮತ್ತು ಬರಹ: ಎಂ.ಬಿ ನೈಯಾಲಿ*


Leave a Reply

Your email address will not be published. Required fields are marked *