ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.
Screenshot
ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ.
ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು ನಿವಾಸಿ, ಎಂಜಿಎಂ ಸಂಧ್ಯಾ ಕಾಲೇಜಿನ ವಿದ್ಯಾರ್ಥಿನಿ ಛಾಯಾ ಕರಾಟೆಯಲ್ಲಿ ರಾಷ್ಟ್ರಮಟ್ಟದ ಸಾಧಕಿಯಾಗಿದ್ದು, ಪ್ರಸ್ತುತ ಖೇಲೋ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮೇಘಾ ಲಯದ ಶಿಲ್ಲಾಂಗ್‌ನಲ್ಲಿಭಾರತೀಯ ಕ್ರೀಡಾ ಪ್ರಾಧಿಕಾರ ಆಯೋಜಿಸಿದ್ದ ರಾಷ್ಟ್ರೀಯ ಕರಾಟೆ ತಂಡದ ಆಯ್ಕೆ ಶಿಬಿರದಲ್ಲಿ 68 ಕೆಜಿ ಕುಮಿಟೆ ವಿಭಾ ಗದಲ್ಲಿ ಟಾಪ್ 4 ಕ್ರೀಡಾಪಟುಗಳಲ್ಲಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಉಡುಪಿ ಜಿಲ್ಲೆಯ ಮೊದಲ ಕ್ರೀಡಾ ಪಟು ಎಂಬ ಹೆಗ್ಗಳಿಕೆ ಇವರದ್ದು. ಈ ಸಾಧನೆಯು ಅವರು ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಸಾಧ್ಯತೆ ಹೆಚ್ಚಿಸಿದೆ.
2015ರಿಂದ ಕರಾಟೆಯಲ್ಲಿ ತೊಡಗಿಸಿಕೊಂಡಿರುವ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಮುನ್ನಡೆಯುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ 66 ಚಿನ್ನದ ಪದಕಗಳು, 30 ಬೆಳ್ಳಿಯ ಪದಕಗಳು ಮತ್ತು 1 ಕಂಚಿನ ಪದಕ ಗಳಿಸಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. 14 ಬಾರಿ ಗ್ರಾಂಡ್ ಚಾಂಪಿಯನ್ ಪ್ರಶಸ್ತಿ, ಭಾರತೀಯ ಶಾಲಾ ಕ್ರೀಡಾಕೂಟದಲ್ಲಿ 3 ಬಾರಿ ಪ್ರಥಮ ಸ್ಥಾನ, ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ಆಯೋಜಿಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 4 ಚಿನ್ನದ ಪದಕಗಳು ಮತ್ತು ರಾಷ್ಟ್ರಮಟ್ಟದಲ್ಲಿ 1 ಕಂಚಿನ ಪದಕ ಇವರ ಖಾತೆಯಲ್ಲಿವೆ. ಮಂಗಳೂರು ವಿವಿ ಅಂತರ್‌ಕಾಲೇಜು ಕ್ರೀಡಾಕೂಟದಲ್ಲಿ 2 ಬಾರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
2024-25ರಲ್ಲಿ ಹರಿಯಾಣದಲ್ಲಿ ನಡೆದ ಅಖಿಲ ಭಾರತ ಅಂತರ್ ವಿವಿ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದರು. ಈ ಸಾಧನೆಗಾಗಿ ಹುಟ್ಟೂರಿನಲ್ಲಿ ಸ್ವಾಗತ, ಸಾರ್ವಜನಿಕ ಸಮ್ಮಾನವೂ ಸಂದಿದೆ.
ಪ್ರವೀಣಾ ಸುವರ್ಣ ನೇತೃತ್ವದ ಪಿಕೆಸಿ ಕರಾಟೆ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಅವರು ಹೆರ್ಗದ ಕಾಂತಾ ಬೆಟ್ಟು ಕೋಟಿ ಪೂಜಾರಿ ಮೊಮ್ಮಗಳು ಮತ್ತು ಸದಾನಂದ ಪೂಜಾರಿ ಸುನೀತಾ ದಂಪತಿಯ ಪುತ್ರಿ.
