ಯುವವಾಹಿನಿ ರಿ ಕೊಲ್ಯ ಘಟಕದ ವತಿಯಿಂದ ಮನೆಮನ ಬೆಳಗಿಸಿದ ಗುರುಭಜನೆ , ಗುರುಸ್ಮರಣೆ

0

ಯುವವಾಹಿನಿ ರಿ ಕೊಲ್ಯ ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳನ್ನು ಪರಿಪಾಲನೆ ಮಾಡುವ ಕಾರ್ಯಗಳಿಗೆ ಪೂರಕವಾಗಿ ನಮ್ಮ ಘಟಕದ ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕಿ ಶ್ರೀಮತಿ ರಶ್ಮಿ ಸನಿಲ್ ರವರ ತರವಾಡು ಮನೆ ಕಣೀರುತೋಟದಲ್ಲಿ ದಿನಾಂಕ 05-10-2023 ನೇ ಗುರುವಾರದಂದು ಸಂಜೆ ಗುರುಭಜನೆ ಮತ್ತು ಗುರುಸ್ಮರಣೆ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಜರುಗಿತು.

IMG 20231015 WA0018 1024x768

ಭಗವಂತನೊಂದಿಗೆ ನೇರವಾಗಿ ಸಂವಾದಿಸುವ ಸಾಧನವೆಂದರೆ ಅದು ಭಜನೆ. ಭಜನೆ ಇದ್ದಲ್ಲಿ ಎಂದಿಗೂ ವಿಭಜನೆ ಇರುವುದಿಲ್ಲ. ದೇವರ ನಾಮವನ್ನು, ಮಹಿಮೆಯನ್ನು ಹಾಡಿ ಭಜಿಸುವ ಮೂಲಕ ಭಗವಂತನೊಂದಿಗೆ ಲೀನವಾಗುವಂತಹ ಆ ಒಂದು ಅನುಭವವನ್ನು ವರ್ಣಿಸಲು ಅಸಾಧ್ಯ. ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಮರೀಚಿಕೆ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆ ಎಂದು ಮನವಿ ಮಾಡಿ, ಈ ಸಂದರ್ಭದಲ್ಲಿ ಬಿಲ್ಲವ ಸೇವಾ ಸಮಾಜ ರಿ ಕೊಲ್ಯ ಇದರ ಹಿರಿಯ ಭಜನಾ ಸಂಚಾಲಕರು, ಯುವವಾಹಿನಿ ರಿ ಕೊಲ್ಯ ಘಟಕದ ಆರೋಗ್ಯ ನಿರ್ದೇಶಕರೂ ಆಗಿರುವ ಶಶಿಕಾಂತ್ ಪರ್ಯತ್ತೂರು ಭಜನೆಯ ಮಹತ್ವದ ಕುರಿತು ವ್ಯಾಖ್ಯಾನ ನೀಡಿದರು.

IMG 20231015 WA0026 1024x768

ಯುವವಾಹಿನಿ ರಿ ಕೊಲ್ಯ ಘಟಕದ ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕಿ ಶ್ರೀಮತಿ ರಶ್ಮಿ ಸನಿಲ್ ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರಣವನ್ನು ಕಥನಕವನದ ಮೂಲಕ ಪ್ರಸ್ತುತ ಪಡಿಸಿದರು. ಬ್ರಹ್ಮಶ್ರೀ ನಾರಾಯಣಗುರುಗಳು ನಡೆದು ಬಂದ ದಾರಿ, ಅವರ ಬದುಕು, ತತ್ವಾದರ್ಶಗಳು, ಸಮಾಜದ ಅಭ್ಯುದಯಕ್ಕೆ ನೀಡಿರುವ ಸಂದೇಶಗಳ ಕುರಿತು ಅರ್ಥಪೂರ್ಣವಾಗಿ ಮಂಡಿಸಿ ಕಿರು ಉಪನ್ಯಾಸ ನೀಡಿದರು.

IMG 20231015 WA0024 1024x576

ಯುವವಾಹಿನಿ ರಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜೇಶ್ ಬಿ. ಈ ಸಂದರ್ಭದಲ್ಲಿ ಹಾಜರಿದ್ದು ಸರ್ವರಿಗೂ ಮಾದರಿಯಾಗಿರುವ ಅರ್ಥಪೂರ್ಣ ಕಾರ್ಯಕ್ರಮದ ಆಯೋಜನೆಗೆ ಅಭಿನಂದನೆ ಸಲ್ಲಿಸಿದರು.‌ ಯುವವಾಹಿನಿ ರಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅದೇ ರೀತಿ ಯುವವಾಹಿನಿ ರಿ ಕೊಲ್ಯ ಘಟಕದ ಮಾಜಿ ಅಧ್ಯಕ್ಷರೂ ಆಗಿರುವ ಶ್ರೀ ಕುಸುಮಾಕರ ಕುಂಪಲರವರು ಸರ್ವರನ್ನು ಒಟ್ಟುಗೂಡಿಸುವ ಭಜನಾ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಮಣ್ಣಿನ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ಕಾಲಘಟ್ಟದಲ್ಲಿ ಈ ರೀತಿಯ ಭಜನಾ ಸಂಕೀರ್ತನೆಗಳು ಬಹಳ ಅರ್ಥಪೂರ್ಣ, ಪ್ರತಿಯೊಬ್ಬರ ಮನೆಮನದಿಂದಲೇ ಈ ಕುರಿತು ಜಾಗೃತಿ ಮೂಡಬೇಕು ಎಂದು ಯುವವಾಹಿನಿ ರಿ ಕೊಲ್ಯ ಘಟಕದ ಅಧ್ಯಕ್ಷರಾದ ಶ್ರೀ ಲತೀಶ್ ಎಂ ಸಂಕೋಳಿಗೆಯವರು ಅಭಿಪ್ರಾಯ ವ್ಯಕ್ತಪಡಿಸಿದರು.

 

ಬಿಲ್ಲವ ಸೇವಾ ಸಮಾಜ ಟ್ರಸ್ಟ್ ರಿ ಇದರ ಅಧ್ಯಕ್ಷರಾದ ಶ್ರೀ ವೇಣುಗೋಪಾಲ ಕೊಲ್ಯ ಉಪಸ್ಥಿತರಿದ್ದರು. ಯುವವಾಹಿನಿ ರಿ ಕೊಲ್ಯ ಘಟಕದ ಸ್ಥಾಪಕಾಧ್ಯಕ್ಷರಾದ ಶ್ರೀ ಸುರೇಶ್ ಬಿಲ್ಲವ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸುಂದರ್ ಸುವರ್ಣ, ಪ್ರಥಮ ಉಪಾಧ್ಯಕ್ಷರು ಶ್ರೀಮತಿ ಸುಧಾ ಸುರೇಶ್, ದ್ವಿತೀಯ ಉಪಾಧ್ಯಕ್ಷರು ಶ್ರೀ ನಿತಿನ್ ಕರ್ಕೇರ ಹಾಗೂ ಮಾಜಿ ಅಧ್ಯಕ್ಷರುಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಯುವವಾಹಿನಿ ರಿ ಕೊಲ್ಯ ಘಟಕದ ಪದಾಧಿಕಾರಿಗಳು, ಸದಸ್ಯರು ಮತ್ತು ಬಂಧುಗಳು, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಮಂಡಳಿಯ ಸದಸ್ಯರು ಹಾಗೂ ಬಿಲ್ಲವ ಸೇವಾ ಸಮಾಜ ರಿ ಕೊಲ್ಯದ ಸದಸ್ಯರು, ರಶ್ಮಿ ಸನಿಲ್ ಕುಟುಂಬಸ್ಥರು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿದ್ದರು. ಭಜನೆಯ ನಂತರ ಗುರುಪೂಜೆ ಮತ್ತು ಪ್ರಸಾದ ವಿತರಣೆ ಹಾಗೂ ಸರ್ವರಿಗೂ ಅನ್ನ ಸಂತರ್ಪಣೆಯನ್ನು ನೀಡಲಾಯಿತು.

ಯುವವಾಹಿನಿ ರಿ ಕೊಲ್ಯ ಘಟಕದ ಕಾರ್ಯದರ್ಶಿ ಶ್ರೀ ಜೀವನ್ ಕೊಲ್ಯ ಕಾರ್ಯಕ್ರಮವನ್ನು ನಿರೂಪಿಸಿದರು.‌


Leave a Reply

Your email address will not be published. Required fields are marked *